ಮನುಮುನಿ ಗುಮ್ಮಟದೇವ -
12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಈತ ಮೊದಲು ಜೈನ ಧರ್ಮಾವಲಂಬಿಯಾಗಿದ್ದು ಅನಂತರ ವೀರಶೈವ ಧರ್ಮ ಸ್ವೀಕರಿಸಿದಂತೆ ತಿಳಿದುಬರುತ್ತದೆ. ಸಕಲ ಪುರಾತನರ ವಚನಗಳಲ್ಲಿ ಈತನ ಬಗ್ಗೆ ಮಾಹಿತಿ ನೀಡುವ ಗದ್ಯವೊಂದು ಈ ರೀತಿ ಇದೆ: ಬಿಜ್ಜಂಳಗೆ ಹದಿನೆಂಟು ದೋಷಗಳು ತೀರ್ಚಿ, ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ ಸರ್ವ ಆತ್ಮ ಭೂತಹಿತನಾಗಿ ಇರೆಂದು ಆತನಿಗೆ ಉಪದೇಶ ಗುರುವಾದ ಮೀಮಾಂಸಕ ಆ ಮೀಮಾಂಸಕಂಗೆ ಸಕಲ ವ್ರತವೇಮ ನಿತ್ಯವ್ರತಮಾನ ಕೃತ್ಯ ಜಿನನೇಮ ಗುಣನಾಮವಂ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯನಾದ, ತನ್ನ ಸಮಯಕ್ಕೆ ಸಿಂಧು ಚಂದ್ರನಾದ ಮನುಮುನಿ ಗುಮ್ಮಟದೇವಗಳ ವಚನ. ಇದರ ಆಧಾರದಿಂದ ಗುಮ್ಮಟದೇವ ಕಲಚುರಿಯ ಬಿಜ್ಜಳನ ಸಮಕಾಲೀನನೂ ಆತನ ಗುರುವೂ ಆಗಿದ್ದನೆಂದು ತಿಳಿದುಬರುತ್ತದೆ.

ಈತ ಗುಡಿಯ ಗುಮ್ಮಟನೊಡೆಯ ಆಗಮೇಶ್ವರ ಲಿಂಗ ಎಂಬ ಅಂಕಿತ ಇಟ್ಟುಕೊಂಡು ವಚನಗಳನ್ನು ರಚಿಸಿದ್ದಾನೆ. ಇಲ್ಲಿಯ ತನಕ ಈತನ ಒಂದು ನೂರು ವಚನಗಳು ದೊರಕಿವೆ. ಇವನ್ನು ಬೆಡಗಿನ ವಚನಗಳು ಮತ್ತು ಸಾಮಾನ್ಯ ವಚನಗಳೆಂದು ವಿಭಾಗಿಸಲಾಗಿದೆ. ಬೆಡಗಿನ ವಚನಗಳು ಹೆಚ್ಚು ತಾತ್ತ್ವಿಕತೆಯಿಂದ ಕೂಡಿವೆ. ಕೆಲವು ವಚನಗಳಲ್ಲಿ ಸಾಹಿತ್ಯಿಕ ಅಂಶವೂ ಕಂಡುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ